ಜೇಡಕೋತಿ
	ಪ್ರೈಮೇಟುಗಳ ಗಣದ ಪ್ಲಾಟಿರೈನಿ ಬುಡಕಟ್ಟಿನ ಸಿಬಿಡೀ ಕುಟುಂಬದ ಅಟಿಲಿನೀ ಉಪಕುಟುಂಬಕ್ಕೆ ಸೇರಿದ ಒಂದು ಕೋತಿ (ಸ್ಪೈಡರ್ ಮಂಕಿ). ಇದಕ್ಕೆ ಜೇಡಕ್ಕಿರುವಂಥ ಉದ್ದ ಕಾಲುಗಳಿರುವುದರಿಂದ ಈ ಹೆಸರು ಬಂದಿದೆ. ಶಾಸ್ತ್ರೀಯ ಹೆಸರು ಆಟಿಲಿಸ್. ಇದರ ತವರು ದಕ್ಷಿಣ ಅಮೆರಿಕ. ಜೇಡಕೋತಿ ಮರಗಳ ಮೇಲೆಯೇ ವಾಸ ಮಾಡುವುದರಿಂದ ಇದರ ಉದ್ದನೆಯ ಕೊಂಡಿ ಆಕಾರದ ಬೆರಳುಗಳು ಮತ್ತು ಮುಂಗಾಲುಗಳು ರೆಂಬೆಯಿಂದ ರೆಂಬೆಗೆ ನೆಗೆದು ಸಾಗುವುದಕ್ಕೆ ಸಹಾಯಕವಾಗಿವೆ. ಆದರೆ ಹೆಬ್ಬೆರಳು ಇಲ್ಲ. ಈ ಕೋತಿಯ ಮತ್ತೊಂದು ಗಮನಾರ್ಹವಾದ ಲಕ್ಷಣವೆಂದರೆ ರೆಂಬೆಗಳನ್ನು ಬಾಲದಿಂದ ಹಿಡಿದುಕೊಳ್ಳುವ ಅದ್ಭುತವಾದ ಸಾಮಥ್ರ್ಯ. ಬಾಲವು ತಲೆ ಮತ್ತು ದೇಹದ ಒಟ್ಟು ಉದ್ದಕ್ಕಿಂತಲೂ ಮಿಗಿಲಾಗಿದೆ. ಕೆಲವು ಪ್ರಭೇದಗಳಲ್ಲಿ 76 ಛಿm. ಉದ್ದದ ಬಾಲ ಉಂಟು. ಹಿಡಿತಕ್ಕೂ ತೂಗಾಡುವಿಕೆಗೂ ಅನುಕೂಲವಾದ ಮತ್ತು ಸ್ಪರ್ಶಗ್ರಾಹಿ ಗುಣವನ್ನುಳ್ಳ ಬಾಲದಿಂದಾಗಿ ಜೇಡಕೋತಿ ಬೇರೆ ಕೋತಿಗಳಿಂದ ಭಿನ್ನವೆನಿಸಿದೆ. ಇದು ಸಂಘಜೀವಿ. ಹಣ್ಣು, ಕಾಯಿ ಮತ್ತು ಕೀಟಗಳು ಇದರ ಪ್ರಧಾನ ಆಹಾರ. ಜೇಡಕೋತಿಗಳಲ್ಲಿ 10-12 ಪ್ರಭೇದಗಳಿವೆ. ಅವನ್ನು ಮುಖ್ಯವಾಗಿ ಅವುಗಳ ಆಕಾರ ಮತ್ತು ದೇಹದ ಬಣ್ಣದಿಂದ ಗುರುತಿಸಬಹುದು. ಕೂದಲುಗಳು ಕಪ್ಪು ಬಣ್ಣದವು ಹಾಗೂ ಉದ್ದ. ಕೆಲವೊಂದು ಪ್ರಭೇದಗಳಲ್ಲಿ ನಸುಬೂದಿ, ಹಳದಿ ಮತ್ತು ನಸುಕೆಂಪು ಕಂದು ಬಣ್ಣದ ಕೂದಲುಗಳುಂಟು. ಜೇಡಕೋತಿ ತನ್ನ ಕಾಲುಗಳ ಮತ್ತು ದೇಹದ ಪ್ರಮಾಣಗಳ ಕೆಲವೊಂದು ಲಕ್ಷಣಗಳಲ್ಲಿ ಪ್ರಾಚೀನ ಪ್ರಪಂಚದ ಗಿಬನ್ ವಾನರವನ್ನು ಸ್ವಲ್ಪ ಮಟ್ಟಿಗೆ ಹೋಲುವುದರಿಂದ ಹೋಲಿಕೆ ಅಂಗರಚನಾಶಾಸ್ತ್ರಜ್ಞರ ಆಸಕ್ತಿಯನ್ನು ಕೆರಳಿಸಿದೆ. ಜೇಡಕೋತಿಯಲ್ಲಿ ದೊಡ್ಡದಾಗಿ ಬೆಳೆದಿರುವ ಮಿದುಳಿದೆ. ಇದು ಬಹಳ ಚುರುಕಾದ ಪ್ರಾಣಿ. ಅಂತೆಯೇ ಬಹಳ ಸಾಧುವೂ ಹೌದು. ಇದನ್ನು ಸಾಕಬಹುದು.       (ಕೆ.ವಿ.ಆರ್.ಜಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ